ಕ್ರಿಕೆಟ್

ಅತ್ತ ಸಚಿನ್ ಹಿಂದೆ ಬಿದ್ದ ಕೊಹ್ಲಿ, ಇತ್ತ ಧೋನಿ ಹಿಂದೆ ಬಿದ್ದಿರುವ ರಿಷಬ್ ಪಂತ್; ಮತ್ತೊಂದು ದಾಖಲೆ ಪತನ

Srinivasamurthy VN
ಪರ್ತ್: ಆಸಿಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಚಿನ್ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಬೆನ್ನಲ್ಲೇ ಮತ್ತೋರ್ವ ಆಟಗಾರ ರಿಷಬ್ ಪಂತ್ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ ದಾಖಲೆಯೊಂದನ್ನು ಪತನ ಮಾಡಿದ್ದಾರೆ.
ಹೌದು.. ಈ ಹಿಂದೆ ಅಡಿಲೇಡ್ ಟೆಸ್ಟ್ ನಲ್ಲಿ ಇನ್ನಿಂಗ್ಸ್ ವೊಂದರಲ್ಲಿ ಅತೀ ಹೆಚ್ಚು ಕ್ಯಾಚ್ ಅಂದರೆ 6 ಕ್ಯಾಚ್ ಪಡೆದು ಧೋನಿ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದ ಪಂತ್ ಇದೀಗ ಮತ್ತದೇ ಧೋನಿ ಹೆಸರಲ್ಲಿದ್ದ ಮತ್ತೊಂದು ದಾಖಲೆಯನ್ನು ಹಿಂದಿಕ್ಕಿದ್ದಾರೆ. ಹೌದು ನಿನ್ನೆ ಶಮಿ ಬೌಲಿಂಗ್ ನಲ್ಲಿ ಆಸಿಸ್ ಆಟಗಾರ ಶಾನ್ ಮಾರ್ಷ್ ಕ್ಯಾಚ್ ಪಡೆಯುವ ಮೂಲಕ ಪಂತ್ ಆಸಿಸ್ ನೆಲದಲ್ಲಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಕ್ಯಾಚ್ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ ಇಂದು ಮತ್ತದೇ ಶಮಿ ಬೌಲಿಂಗ್ ನಲ್ಲಿ ಫಿಂಚ್ ಕ್ಯಾಚ್ ಪಡೆಯುವ ಮೂಲಕ ಪಂತ್ ತಮ್ಮ ಕ್ಯಾಚಿಂಗ್ ಗಳ ಸಂಖ್ಯೆಯನ್ನು 15ಕ್ಕೆ ಏರಿಸಿಕೊಂಡಿದ್ದಾರೆ.
ಆ ಮೂಲಕ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಸೈಯ್ಯದ್ ಕಿರ್ಮಾನಿ ಅವರು 1979-80ರಲ್ಲಿ ನಡೆದಿದ್ದ ಸರಣಿಯಲ್ಲಿ 11 ಕ್ಯಾಚ್ ಮತ್ತು 3ಸ್ಟಂಪ್ ಮಾಡಿ ಅಗ್ರಸ್ಥಾನದಲ್ಲಿದ್ದರು. ಅವರ ಬಳಿಕ ಭಾರತದ ಮಹೇಂದ್ರ ಸಿಂಗ್ ಧೋನಿ 2012/13ರಲ್ಲಿ 9 ಕ್ಯಾಚ್ ಮತ್ತು 5 ಸ್ಟಂಪೌಟ್ ಮಾಡಿ 2ನೇ ಸ್ಥಾನದಲ್ಲಿದ್ದರು. 2014/15 ರಲ್ಲಿ ಮತ್ತದೇ ದೋನಿ 13 ಕ್ಯಾಚ್ ಮತ್ತು 1 ಸ್ಟಂಪೌಟ್ ಮಾಡಿ ಮತ್ತೆ ಎರಡನೇ ಸ್ಥಾನಕ್ಕೇರಿದ್ದರು. 2016/17ರಲ್ಲಿ ವೃದ್ದಿಮಾನ್ ಸಾಹಾ 13 ಕ್ಯಾಚ್ ಮತ್ತು 1 ಸ್ಟಂಪೌಟ್ ಮಾಡಿ ಈ ದಾಖಲೆ ಸರಿಗಟ್ಟಿದ್ದರು. 
ಆದರೀಗ 15 ಕ್ಯಾಚ್ ಗಳ ಮೂಲಕ ಈ ದಾಖಲೆಯನ್ನೂ ಮುರಿದು ಹಾಕಿದ್ದಾರೆ. ಆ ಮೂಲಕ ತಾವು ಭವಿಷ್ಯದ ಟೀಂ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕೆ ಪ್ರಬಲ ಪೈಪೋಟಿ ಆಟಗಾರ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.
SCROLL FOR NEXT